ಭಟ್ಕಳ, ನವೆಂಬರ್ 6: ಭಟ್ಕಳ ಸರಕಾರಿ ಕಾಲೇಜಿನ ಬುರ್ಖಾ ಧಾರಣೆಯ ಪ್ರಕರಣ ಹೊಸ ತಿರುವನ್ನು ಪಡೆದಿದ್ದು, ಕಾಲೇಜಿನಲ್ಲಿ ಕೇವಲ ಸಮವಸ್ತೃವನ್ನಷ್ಟೇ ಕಡ್ಡಾಯಗೊಳಿಸಿ ನಿಯಮವನ್ನು ಜಾರಿಗೊಳಿಸುವಂತೆ ಒತ್ತಾಯಿಸಿರುವ ವಿದ್ಯಾರ್ಥಿಗಳು ಕೇಸರಿ ಧರಿಸಿ ಕಾಲೇಜಿಗೆ ಬರುವುದರ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.


ಶುಕ್ರವಾರ ಮುಂಜಾನೆಯಿಂದಲೇ ಕೇಸರಿ ಶ್ಯಾಲು ಹಾಗೂ ಪಂಚೆ ಧರಿಸಿದ ಕೆಲವು ವಿದ್ಯಾರ್ಥಿಗಳು ಹಣೆಯಲ್ಲಿ ನಾಮವನ್ನಿಟ್ಟುಕೊಂಡು ತರಗತಿಗೆ ಹಾಜರಾದರು. ಇವರೊಂದಿಗೆ ಕೆಲವು ವಿದ್ಯಾರ್ಥಿನಿಯರೂ ಸೇರಿಕೊಂಡು ಕೇಸರಿ ಪಡೆಗೆ ಬೆಂಬಲ ಸೂಚಿಸಿದರು. ತರಗತಿಯ ಒಳಗೆ ಉಳಿದ ಬಟ್ಟೆಯನ್ನು ನಿಷೇಧಿಸುವವರೆಗೂ ತಾವು ಕೇಸರಿಯನ್ನೇ ಧರಿಸಿ ಬರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಸಮವಸ್ತೃದ ಕುರಿತಂತೆ ಪ್ರವೇಶ ಪಡೆಯುವ ಸಂದರ್ಭದಲ್ಲಿಯೇ ಕಾಲೇಜು ಆಡಳಿತಕ್ಕೆ ಎಲ್ಲ ವಿದ್ಯಾರ್ಥಿಗಳು ಮುಚ್ಚಳಿಕೆಯನ್ನು ಬರೆದು ಕೊಟ್ಟಿದ್ದೇವೆ. ಒಂದೆರಡು ವಿದ್ಯಾರ್ಥಿಗಳು ತರಗತಿಯ ಒಳಗೆ ಬುರ್ಖಾ ಧರಿಸುತ್ತಿದ್ದು, ಇದೇ ಕಾರಣಕ್ಕೆ ತರಗತಿಗಳಲ್ಲಿ ಶಿಸ್ತು ಕಾಣೆಯಾಗುತ್ತಿದೆ. ಇದರಲ್ಲಿ ಯಾವುದೇ ಧರ್ಮವನ್ನು ಅವಹೇಳನ ಮಾಡುವ ಪ್ರಶ್ನೆಯೇ ಇಲ್ಲ. ಇದು ಬುರ್ಖಾದ ವಿರುದ್ಧ ನಡೆಯುತ್ತಿರುವ ಚಟುವಟಿಕೆಯೂ ಅಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದೊಂದು ಸಮಸ್ಯೆಯೇ ಆಗಿರಲಿಲ್ಲ. ಆದರೆ ಕೆಲವರು ಇದನ್ನು ಕಾಲೇಜಿನಾಚೆಗೆ ತೆಗೆದುಕೊಂಡು ಹೋಗಿ ರಾಡಿ ಎಬ್ಬಿಸಿದ್ದಾರೆ. ಅಷ್ಟಕ್ಕೂ ಸಮವಸ್ತೃ ಧಾರಣೆಯ ಕುರಿತಂತೆ ಯಾವುದೇ ವಿಶ್ವವಿದ್ಯಾಲಯವೂ ಕಾಲೇಜಿನ ಮೇಲೆ ನಿಯಮಗಳನ್ನು ಹೇರುವುದಿಲ್ಲ. ಹಾಗೆಯೇ ಸರಕಾರದ ಬಳಿ ಕೇಳಲೂ ಏನೂ ಉಳಿದಿಲ್ಲ ಎಂದು ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಸಮಿತಿಯ (ಸಿಡಿಸಿ) ನಿರ್ಣಯಕ್ಕೆ ತಿರುಗೇಟು ನೀಡಿದರು. ಈ ಕುರಿತು ಮಾಧ್ಯಮದ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಪ್ರಾಚಾರ್ಯ ಡಾ.ಐ.ಆರ್.ಖಾನ್, ಇದೊಂದು ಅನಿರೀಕ್ಷಿತ ಬೆಳವಣಿಗೆಯಾಗಿದ್ದು, ಶಿಸ್ತು ಪಾಲನೆಯ ಕುರಿತಂತೆ ಎಲ್ಲ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತೇವೆ. ಪುನರಾವರ್ತನೆಗೊಂಡರೆ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶನದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿದೆ ಎಂಬ ವಿಶ್ವಾಸವನ್ನವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.